ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹೊಸದಿಲ್ಲಿ: ಏರ್ ಇಂಡಿಯಾ ಪೈಲಟ್ ಗಳ ಮುಷ್ಕರ - ಹದಿನೈದು ದಿನ ಹಾರಾಟ ಸ್ಥಗಿತ

ಹೊಸದಿಲ್ಲಿ: ಏರ್ ಇಂಡಿಯಾ ಪೈಲಟ್ ಗಳ ಮುಷ್ಕರ - ಹದಿನೈದು ದಿನ ಹಾರಾಟ ಸ್ಥಗಿತ

Tue, 29 Sep 2009 02:39:00  Office Staff   S.O. News Service
ಹೊಸದಿಲ್ಲಿ, ಸೆ.28: ಪೈಲಟ್‌ಗಳ ಮುಷ್ಕರದ ಹಿನ್ನೆಲೆಯಲ್ಲಿ ಏರ್‌ಇಂಡಿಯಾ ಕನಿಷ್ಠ ೧೫ ದಿನಗಳ ಕಾಲ ತನ್ನ ಎಲ್ಲ ವಿಮಾನಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದು, ಇದು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವ ನಿರೀಕ್ಷೆಯಿದೆ.

ಏರ್‌ಇಂಡಿಯಾ ತನ್ನ ಎಲ್ಲ ಪೈಲಟ್‌ಗಳನ್ನೂ ಪಾಳಿಯಿಂದ ತೆಗೆದುಹಾಕಲು ಹಾಗೂ ಕೆಲವರನ್ನು ಉಚ್ಚಾಟಿಸಲು ನಿರ್ಧರಿಸಿದೆಯೆಂದು ಮೂಲಗಳು ತಿಳಿಸಿವೆ.

ಇಂದು ಮುಷ್ಕರ ನಿರತರು ಹಾಗೂ ಏರ್ ಇಂಡಿಯಾದ ಆಡಳಿತ ನಿರ್ದೇಶಕ ಅರವಿಂದ್ ಜಾಧವ್ ನಡುವಿನ ಮಾತುಕತೆ ಮುರಿದು ಬಿದ್ದಿದೆ.

ಕಡಿತಗೊಳಿಸಿರುವ ವೇತನ ಹಾಗೂ ಭತ್ತೆಯನ್ನು ನೀಡದಿದ್ದಲ್ಲಿ ಸಾಮೂಹಿಕವಾಗಿ ಅನಾರೋಗ್ಯದ ರಜೆ ಹಾಕಲು ಪೈಲಟ್‌ಗಳು ನಿರ್ಧರಿಸಿದ್ದಾರೆ.

ಮುಷ್ಕರ ನಾಲ್ಕನೆ ದಿನಕ್ಕೆ

ಹೊಸದಿಲ್ಲಿ: ಏರ್‌ಇಂಡಿಯಾ ಪೈಲಟ್‌ಗಳ ಮುಷ್ಕರವು ಮೂರನೆ ದಿನವನ್ನು ಪೂರ್ಣಗೊಳಿಸಿದ್ದು, ಇದರ ಫಲವಾಗಿ ವಿಮಾನ ಸಂಸ್ಥೆಯು ೧೮ ದೇಶೀಯ ಹಾಗೂ ಎರಡು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನಿಂದು ರದ್ದುಪಡಿಸಬೇಕಾಯಿತು.
ದಿಲ್ಲಿ, ಕೋಲ್ಕತಾ ಹಾಗೂ ಬೆಂಗಳೂರುಗಳ ನಡುವೆ ಹಾರಾಟ ನಡೆಸುವ ವಿಮಾನಗಳಲ್ಲದೆ, ಗುವಾಹತಿ-ಬೆಂಗಳುರು ಹಾಗೂ ಹೈದರಾಬಾದ್ ತಿರುಪತಿ ವಿಮಾನಗಳು ರದ್ದುಗೊಳಿಸಲ್ಪಟ್ಟವುಗಳಲ್ಲಿ ಸೇರಿವೆ.

ಪೈಲಟ್‌ಗಳು ತಮ್ಮ ನ್ಯಾಯಬದ್ಧವಾದ ಬೇಡಿಕೆಗಳನ್ನಷ್ಟೇ ಮುಂದಿಟ್ಟಿದ್ದಾರೆ. ಅದಕ್ಕೆ ತಾವು ಯಾವುದೇ ಶರ್ತ ವಿಧಿಸಿಲ್ಲ. ತಮಗೆ ನ್ಯಾಯೋಚಿತವಾಗಿ ದೊರೆಯಬೇಕಾದುದನ್ನಷ್ಟೇ ಕೇಳುತ್ತಿದ್ದೇವೆ. ಮೂರು ತಿಂಗಳಿಂದ ತಾವು ಯಾವುದೇ ಭತ್ತೆಯಿಲ್ಲದೆ ಕೆಲಸ ಮಾಡುತ್ತಿದ್ದೇವೆ ಎಂದು ಕಾರ್ಯಕಾರಿ ಪೈಲಟ್‌ಗಳ ಪ್ರತಿನಿಧಿ ಕ್ಯಾಪ್ಟನ್ ವಿ.ಕೆ. ಭಲ್ಲಾ ಹೇಳಿದ್ದಾರೆ.

ಏರ್‌ಇಂಡಿಯಾ ಆಡಳಿತ ಹಾಗೂ ಪೈಲಟ್‌ಗಳ ನಡುವೆ ರವಿವಾರ ನಡೆದ ೫ ತಾಸು ದೀರ್ಘದ ಮಾತುಕತೆ ಯಾವುದೇ ಒಪ್ಪಂದಕ್ಕೆ ಬರಲು ವಿಫಲವಾಗಿದೆ. ತಮಗೆ ಮೂರು ತಿಂಗಳ ಬಾಕಿ ಭತ್ತೆಯನ್ನು ಪಾವತಿಸುವಂತೆ ಪೈಲಟ್‌ಗಳು ಆಗ್ರಹಿಸುತ್ತಿದ್ದಾರೆ.

ಸಾಧನೆ ಆಧಾರಿತ ಪ್ರೋತ್ಸಾಹ ಧನವನ್ನೂ ಕಡಿತ ಮಾಡಲಾಗಿದ್ದು, ಪೈಲಟ್‌ಗಳ ಈ ಬೇಡಿಕೆ ಪರಿಶೀಲನೆಗೆ ಸಮಿತಿಯೊಂದನ್ನು ನೇಮಿಸಲಾಗಿದೆ.

ವಿಮಾನ ಸಂಸ್ಥೆಯ ಪ್ರಸ್ತಾಪವನ್ನು ವಿರೋಧಿಸಿ ಸುಮಾರು ೪೦೦ ಪೈಲಟ್‌ಗಳು ಅನಾರೋಗ್ಯ ರಜೆಯನ್ನು ಸಾಮೂಹಿಕವಾಗಿ  ಹಾಕುವ ಬೆದರಿಕೆಯೊಡ್ಡಿದ್ದಾರೆ.
ಕೆಲವು ಪೈಲಟ್‌ಗಳು ಈಗಾಗಲೇ ಅನಾರೋಗ್ಯ ರಜೆಯನ್ನು ಹಾಕಿರುವ ಹಿನ್ನೆಲೆಯಲ್ಲಿ ಶನಿವಾರ, ರವಿವಾರ ಹಾಗೂ ಇಂದು ಅನೇಕ ವಿಮಾನಗಳನ್ನು ರದ್ದುಪಡಿಸಬೇಕಾಯಿತು.
ಖರ್ಚು ಕಡಿತಗೊಳಿಸುವ ಕ್ರಮವಾಗಿ ಉದ್ಯೋಗಿಗಳಿಗೆ ನೀಡುವ ಸಾಧನೆ ಆಧಾರಿತ  ಭತ್ತೆಯನ್ನು ಶೇ.೨೫-೫೦ರಷ್ಟು ಕಡಿಮೆ ಮಾಡಲು ಏರ್ ಇಂಡಿಯಾ ಕಳೆದ ಮಂಗಳವಾರ ನಿರ್ಧರಿಸಿತ್ತು

Share: